ಕಳಲೆ

 ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ನಂಜನಗೂಡಿನಿಂದ 5 ಮೈಲಿಗಳ ದೂರದಲ್ಲಿ ಮೈಸೂರು-ನೀಲಗಿರಿ ರಸ್ತೆಯ ಪಕ್ಕದಲ್ಲಿರುವ ಗ್ರಾಮ.  ಇದು ಕಳಲೆ ಒಡೆಯರ ಕೇಂದ್ರಸ್ಥಾನವಾಗಿತ್ತು. ಊರಿನ ಮಧ್ಯದಲ್ಲಿಯ ಪಟ್ಟದ ಚಾವಡಿಯೆಂಬ ಪರಾತನ ಕಟ್ಟಡ ಅವರ ಪಟ್ಟಾಭಿಷೇಕ ನಡೆಯುತ್ತಿದ್ದ ಸ್ಥಳವೆಂದೂ ಅದರ ಪಕ್ಕದ ಸ್ಥಳದಲ್ಲಿ ಅವರ ಅರಮನೆಯಿತ್ತೆಂದೂ ಐತಿಹ್ಯ ಹೇಳುತ್ತದೆ.

 ಇಲ್ಲಿರುವ ಲಕ್ಷ್ಮೀಕಾಂತ ದೇವಾಲಯ ದ್ರಾವಿಡಶೈಲಿಗೆ ಸೇರಿದ್ದು. ಚಾವಣಿಯ ಮೇಲಿರುವ ಗೂಡುಗಳಲ್ಲಿ ಉತ್ತಮವಾದ ಗಾರೆಯ ಪ್ರತಿಮೆಗಳಿವೆ. ನಂಬಿನಾರಾಯಣ ರೂಪದಲ್ಲಿರುವ ವಿಗ್ರಹ 3 1/2' ಎತ್ತರದ ಸುಂದರ ಶಿಲ್ಪ. ದಳವಾಯಿ ದೇವರಾಜಯ್ಯನ ಮನೆದೇವರಾದ ರಾಮವಿಗ್ರಹವನ್ನು ಅವನ ಮರಣಾನಂತರ ದೇವಾಲಯಕ್ಕೆ ಕೊಡಲಾಯಿತು. ಈ ಸುಂದರ ವಿಗ್ರಹದ ಪ್ರಭಾವಳಿಯ ಮೇಲೆ ದಶಾವತಾರಗಳ ಚಿತ್ರಗಳಿವೆ. ದೇವಸ್ಥಾನದ ಪ್ರಾಕಾರದಲ್ಲಿ ಪರವಾಸುದೇವನ, ನಮ್ಮಾಳ್ವಾರ್ ಮತ್ತು ಇತರ ಆಳ್ವಾರುಗಳ ಮತ್ತು ಲಕ್ಷ್ಮೀದೇವಿಯ ಗುಡಿಗಳಿವೆ. ಮೈಸೂರು ರಾಜಮನೆತನದ ಚಿಹ್ನೆಗಳಾದ ಶಂಖ, ಚಕ್ರ, ಮತ್ಸೈ ಮತ್ತು ಯಾಳಿಗಳ ಶಿಲ್ಪಗಳು ಇಲ್ಲಿರುವುದು ಗಮನಾರ್ಹ.  ಕಳಲೆಯ ನಂಜರಾಜ ಇವನ್ನು ಕೊಟ್ಟುದಾಗಿ ಇವುಗಳ ಮೇಲಿನ ಶಾಸನಗಳಿಂದ ತಿಳಿದುಬರುತ್ತದೆ.  ಬೆಳ್ಳಿಯ ಪಾತ್ರೆಗಳನ್ನು ದಳವಾಯಿ ನಂಜರಾಜ, ಲಕ್ಷ್ಮಮ್ಮಣ್ಣಿ, ಚೆಲುವೇ ಅರಸು  ಇವರು ಮಂದಿರಕ್ಕೆ ಕೊಟ್ಟರೆಂದು ಅವುಗಳ ಮೇಲಿನ ಶಾಸನಗಳಿಂದ ಗೊತ್ತಾಗುತ್ತದೆ. ದೇವಾಲಯದ ಹೊರವಲಯದಲ್ಲಿ ಎತ್ತರವೂ ಮನೋಹರವೂ ಆದ ಮಂಟಪವೊಂದುಂಟು. ಪಟ್ಟದ ಚಾವಡಿಯ ಮುಂಭಾಗದಲ್ಲಿ ಕಳಲೆಯ ಒಡೆಯ ಲಕ್ಷ್ಮೀಕಾಂತ ಒಡೆಯರ್ ಮತ್ತು ಆತನ ಪತ್ನಿಯ ಶಿಲ್ಪಗಳಿರುವ ಸತೀ ಕಲ್ಲೊಂದನ್ನು ಕಾಣಬಹುದು. ಶತೃಗಳಿಂದ ಲಕ್ಷ್ಮೀಕಾಂತ ಸಾವಿಗೆ ಈಡಾದಾಗ ಸಹಗಮನ ಮಾಡಿದ ಪತ್ನಿ ತನ್ನ ಪತಿಯನ್ನು ಆಲಿಂಗಿಸಿಕೊಂಡು ಮುದ್ದಿಸುತ್ತಿರುವಂತೆ ಮತ್ತು ಸ್ವರ್ಗದಲ್ಲಿ ಇವರ ಸಮಾಗಮವಾದಂತೆ ಶಿಲ್ಪಗಳು ತೋರಿಸುತ್ತವೆ.

 ಕಳಲೆ ಮತ್ತು ಮೈಸೂರು ಮನೆತನಗಳ ನಡುವೆ ಆಗಾಗ್ಗೆ ವಿವಾಹ ಸಂದರ್ಭಗಳೇರ್ಪಡುತ್ತಿದ್ದು, ಅನಂತರ ಅವೆರಡು ಮನೆತನಗಳ ಸಮ್ಮಿಲನವಾದ ಸಂಗತಿ ೧೭೫೮ ರ ಇಮ್ಮಡಿ ಕೃಷ್ಣರಾಜ ಒಡೆಯರ ಭಾಷಾಪತ್ರದಿಂದ ಶ್ರುತಪಡುತ್ತದೆ.  ಉಮ್ಮತ್ತೂರಿನ ಪಾಳೆಯಗಾರರು ಕಳಲೆ ಮನೆತನದ ವೈರಿಗಳಾಗಿದ್ದರು. ಒಮ್ಮೆ ಅವರು ಕಳಲೆ ಮನೆತನದವರನ್ನು ಮೋಸದಿಂದ ಕೊಲ್ಲಿಸಿದಾಗ ಅವರ ಪೈಕಿ ಒಬ್ಬ ಮಾತ್ರ ತಪ್ಪಿಸಿಕೊಂಡು ತನ್ನ ಮನೆತನದ ಗೌರವವನ್ನು ಪುನಃ ಸ್ಥಾಪಿಸಿದ. ಅನಂತರ ಕಾಲದಲ್ಲಿ ಈ ವಂಶದ ದೇವರಾಜ ಮೈಸೂರು ಸೈನ್ಯದ ದಂಡಾಧಿನಾಯಕನೂ ಅವನ ತಮ್ಮ ನಂಜರಾಜ ಅರಮನೆಯ ಸರ್ವಾಧಿಕಾರಿಯೂ ಆಗಿ ರಾಜ್ಯದಲ್ಲಿ ಬಹಳ ಪ್ರಬಲರಾಗಿದ್ದರು. ಇವರ ಪ್ರಾಬಲ್ಯವನ್ನುಪಯೋಗಿಸಿಕೊಂಡು ಮುಂದೆ ಬಂದ ಹೈದರಾಲಿ ಈ ಸಹೋದರರನ್ನು ನಿವೃತ್ತಿಗೊಳಿಸಿ, ತಾನು ಅವರ ಸ್ಥಾನವನ್ನು ಆಕ್ರಮಿಸಿಕೊಂಡ. ಪ್ರಾರಂಭದಲ್ಲಿ ದೈವಭಕ್ತಿಪರನಾಗಿದ್ದ ನಂಜರಾಜ 1741ರಲ್ಲಿ ಕನ್ನಂಬಾಡಿಯ ಬಳಿ ನಂಜರಾಜ ಅಗ್ರಹಾರವನ್ನು ನಿರ್ಮಿಸಿದುದಲ್ಲದೆ ಹಲವು ದೇವಾಲಯಗಳಿಗೆ ದತ್ತಿಗಳನ್ನು ನೀಡಿದ. ಇವರ ತಂದೆ ಕಳಲೆಯ ವೀರರಾಜ ಸ್ವತಃ ಕವಿ; ಕವಿಗಳಿಗೂ ಪಂಡಿತರಿಗೂ ಆಶ್ರಯದಾತ. ದೇವರಾಜ ಮತ್ತು ನಂಜರಾಜರೂ ಕವಿಜನ ಪೋಷಕರಾಗಿದ್ದರು.

 
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ